ಎಷ್ಟು ಸಾಹಸವಂತ ನೀನೇ ಬಲವಂತ
ದಿಟ್ಟ ಮೂರುತಿ ಭಳಿರೇ ಭಳಿರೇ ಹನುಮಂತ
ಅಟ್ಟುವ ಖಳರೆದೆ ಮೆಟ್ಟಿ ತುಳಿದು ತಲೆ
ಕುಟ್ಟಿ ಚೆಂಡಾಡಿದ ದಿಟ್ಟ ನೀನಹುದೋ
ಚರಣಗಳು:
ರಾಮರಪ್ಪಣೆಯಿಂದ ಶರಧಿಯ ದಾಟಿ
ಆ ಮಹಾ ಲಂಕೆಯ ಕಂಡೆ ಕಿರೀಟಿ
ಸ್ವಾಮಿಯ ಕಾರ್ಯವ ಪ್ರೇಮದಿ ನಡೆಸಿದೆ
ಈ ಮಹಿಯೊಳು ನಿನಗಾರೈ ಸಾಟಿ
ದೂರದಿಂದಸುರನ ಪುರವನೆ ನೋಡಿ
ಭರದಿ ಶ್ರೀರಾಮರ ಸ್ಮರಣೆಯ ಮಾಡಿ
ಹಾರಿದೆ ಹರುಷದಿ ಹರಿಸಿ ಲಂಕಿಣಿಯನು
ವಾರಿಜಮುಖಿಯನು ಕಂಡು ಮಾತಾಡಿ ॥ಎಷ್ಟು ಸಾಹಸವಂತ॥
ರಾಮರ ಕ್ಷೇಮವ ರಮಣಿಗೆ ಪೇಳಿ
ತಾಮಸ ಮಾಡದೆ ಮುದ್ರಿಕೆ ನೀಡಿ
ಪ್ರೇಮದಿ ಜಾನಕಿ ಕುರುಹನು ಕೊಡಲಾಗ
ಆ ಮಹಾವನದೊಳು ಫಲವನು ಬೇಡಿ
ಕಣ್ಣಿಗೆ ಪ್ರಿಯವಾದ ಹಣ್ಣನು ಕೊಯ್ದು
ಹಣ್ಣಿನ ನೆವದಲಿ ಅಸುರರ ಹೊಯ್ದು
ಪಣ್ಣಪಣ್ಣನೆ ಹಾರಿ ನೆಗೆನೆಗೆದಾಡುತ
ಬಣ್ಣಿಸಿ ಅಸುರರ ಬಲವನು ಮುರಿದು ॥ಎಷ್ಟು ಸಾಹಸವಂತ॥
ಶೃಂಗಾರ ವನದೊಳಗೆ ಇದ್ದ ರಕ್ಕಸರ
ಅಂಗವನಳಿಸಿದೆ ಅತಿರಣಶೂರ
ನುಂಗಿ ಅಸ್ತ್ರಗಳ ಅಕ್ಷಯ ಕುವರನ
ಭಂಗಿಸಿ ಬಿಸುಟೆಯೋ ಬಂದ ರಕ್ಕಸರ
ದೂರು ಪೇಳಿದರೆಲ್ಲಾ ರಾವಣನೊಡನೆ
ಚೀರುತ ಕರೆಸಿದ ಇಂದ್ರಜಿತುವನೆ
ಚೋರಕಪಿಯ ನೀ ಹಿಡಿತಹುದೆನ್ನುತ
ಶೂರರ ಕಳುಹಿದ ನಿಜಸುತನೊಡನೆ ॥ಎಷ್ಟು ಸಾಹಸವಂತ॥
ಪಿಡಿದನು ಇಂದ್ರಜಿತು ಕಡು ಕೋಪದಿಂದ
ಹೆಡೆಮುರಿ ಕಟ್ಟಿದ ಬ್ರಹ್ಮಾಸ್ತ್ರದಿಂದ
ಗುಡುಗುಡುಗುಟ್ಟುತ ಕಿಡಿಕಿಡಿಯಾಗುತ
ನಡೆದನು ಲಂಕೆಯ ಒಡೆಯನಿದ್ದೆಡೆಗೆ
ಕಂಡನು ರಾವಣನುದ್ದಂಡಕಪಿಯನು
ಮಂಡೆಯ ತೂಗುತ ಮಾತಾಡಿಸಿದನು
ಭಂಡು ಮಾಡದೆ ಬಿಡೆನೋಡು ಕಪಿಯನೆ
ಗಂಡುಗಲಿಯು ದುರುದುರಿಸಿ ನೋಡಿದನು ॥ಎಷ್ಟು ಸಾಹಸವಂತ॥
ಛಲವ್ಯಾಕೋ ನಿನಗಿಷ್ಟು ಎಲವೋ ಕೊಡಗನೆ
ನೆಲೆಯಾವುದು ಹೇಳೋ ನಿನ್ನೊಡೆಯನೆಸರನ್ನು
ಬಲವಂತ ರಾಮರ ಬಂಟ ಬಂದಿಹೆನೋ
ಹಲವು ಮಾತ್ಯಾಕೋ ಹನುಮನು ನಾನೇ
ಬಡ ರಾವಣನೆ ನಿನ್ನ ಬಡಿದು ಹಾಕುವೆನೋ
ಒಡೆಯನಪ್ಪಣೆಯಿಲ್ಲ ಎಂದು ತಾಳಿದೆನೋ
ಹುಡಿಯೇಳಿಸುವೆನೋ ಖೂಳ ರಕ್ಕಸರನೆ
ತೊಡೆವೆನೋ ನಿನ್ನ ಪಣೆಯ ಅಕ್ಷರವ ॥ಎಷ್ಟು ಸಾಹಸವಂತ॥
ನಿನ್ನಂಥ ದೂತರು ರಾಮನ ಬಳಿಯೊಳು
ಇನ್ನೆಷ್ಟು ಮಂದಿ ಉಂಟು ಹೇಳೋ ನೀ ತ್ವರಿಯ
ನನ್ನಂಥ ದೂತರು ನಿನ್ನಂಥ ಪ್ರೇತರು
ಇನ್ನೂರು ಮುನ್ನೂರು ಕೋಟಿ ಕೇಳರಿಯಾ
ಕಡು ಕೋಪದಿಂದಲಿ ಖೂಳ ರಾವಣನು
ಸುಡಿರೆಂದ ಬಾಲವ ಸುತ್ತಿ ವಸನವ
ಒಡೆಯನ ಮಾತಿಗೆ ತಡೆಬಡೆ ಇಲ್ಲದೆ
ಒಡನೆ ಮುಟ್ಟಿದರು ಗಡಿಮನೆಯವರು ॥ಎಷ್ಟು ಸಾಹಸವಂತ॥
ತಂದರು ವಸನವ ತಂಡತಂಡದಲಿ
ಒಂದೊಂದು ಮೂಟೆ ಎಂಭತ್ತು ಕೋಟಿಯಲ್ಲಿ
ಚಂದದಿ ಹರಳಿನ ತೈಲದೊಳದ್ದಿಸಿ
ನಿಂದ ಹನುಮನು ಬಾಲವ ಬೆಳೆಸುತ
ಶಾಲು ಸಕಲಾತಿಯು ಸಾಲದೆಯಿರಲು
ಬಾಲೇರ ವಸ್ತ್ರವ ಸೆಳೆದು ತಾರೆನಲು
ಬಾಲವ ನಿಲ್ಲಿಸೆ ಬೆಂಕಿಯನಿಡುತಲಿ
ಕಾಲಮೃತ್ಯುವ ಕೆಣಕಿದರಲ್ಲಿ ॥ಎಷ್ಟು ಸಾಹಸವಂತ॥
ಕುಣಿಕುಣಿದಾಡುತ ಕೂಗಿ ಬೊಬ್ಬಿಡುತ
ಇಣುಕಿನೋಡುತ ಅಸುರರನಣಕಿಸುತ
ಝಣಝಣಝಣರೆನೆ ಬಾಲದ ಗಂಟೆಯು
ಮನದಿ ಶ್ರೀ ರಾಮರ ಪಾದವ ನೆನೆಯುತ
ಮಂಗಳಂ ಶ್ರೀ ರಾಮಚಂದ್ರ ಮೂರುತಿಗೆ
ಮಂಗಳಂ ಸೀತಾದೇವಿ ಚರಣಂಗಳಿಗೆ
ಮಂಗಳವೆನುತ ಲಂಕೆಯಸುಟ್ಟು
ಲಂಘಿಸಿ ಅಸುರನ ಗಡ್ದಕೆ ಹಿಡಿದ ॥ಎಷ್ಟು ಸಾಹಸವಂತ॥
ಹೊತ್ತಿತು ಅಸುರನ ಗಡ್ಡ ಮೀಸೆಗಳು
ಸುತ್ತಿತು ಹೊಗೆ ಬ್ರಹ್ಮಾಂಡ ಕೋಟಿಯೊಳು
ಚಿತ್ತದಿ ರಾಮರು ಕೋಪಿಸುವರು ಎಂದು
ಚಿತ್ರದಿ ನಡೆದನು ಅರಸನಿದ್ದೆಡೆಗೆ
ಸೀತೆಯ ಕ್ಷೇಮವ ರಾಮರಿಗ್ಹೇಳಿ
ಪ್ರೀತಿಯಿಂ ಕೊಟ್ಟ ಕುರುಹ ಕರದಲ್ಲಿ
ಸೇತುವೆ ಕಟ್ಟಿ ಚತುರಂಗ ಬಲಸಹ
ಮುತ್ತಿತು ಲಂಕೆಯ ಸೂರೆಗೈಯ್ಯುತಲಿ ॥ಎಷ್ಟು ಸಾಹಸವಂತ॥
ವೆಗ್ಗಳವಾಯಿತು ರಾಮರ ದಂಡು
ಮುತ್ತಿತು ಲಂಕೆಯ ಕೋಟೆಯ ಕಂಡು
ಹೆಗ್ಗದ ಕಾಯ್ವರ ನುಗ್ಗು ಮಾಡುತಿರೆ
ಜಗ್ಗನೆ ಪೇಳ್ದರು ರಾವಣಗಂದು
ರಾವಣ ಮೊದಲಾದ ರಾಕ್ಷಸರ ಕೊಂದು
ಭಾವಶುದ್ಧದಲಿ ವಿಭೀಷಣ ಬಾಳೆಂದು
ದೇವಿ ಸೀತೆಯನೊಡಗೊಂಡು ಅಯೋಧ್ಯದಿ
ದೇವ ಶ್ರೀ ರಾಮರು ರಾಜ್ಯವಾಳಿದರು ॥ಎಷ್ಟು ಸಾಹಸವಂತ॥
ಶಂಖದೈತ್ಯನ ಕೊಂದೆ ಶರಣು ಶರಣಯ್ಯ
ಶಂಖಗಿರಿಯಲಿ ನಿಂದ ಹನುಮಂತರಾಯ
ಪಂಕಜಾಕ್ಷ ಹಯವದನನ ಕಟಾಕ್ಷದಿ
ಬಿಂಕದಿ ಪಡೆದೆಯೋ ಅಜನಪದವಿಯ ॥ಎಷ್ಟು ಸಾಹಸವಂತ॥
ಅನಂಗ ಎಂದರೆ "ದೇಹವಿಲ್ಲದವನು". ಇದು ಕಾಮದೇವಯ ಒಂದು ಹೆಸರು. ಪುರಾಣಗಳ ಪ್ರಕಾರ, ಶಿವನು ತನ್ನ ತಪಸ್ಸಿನ ಅವಸ್ಥೆಯಲ್ಲಿ ಕಾಮದೇವನನ್ನು ಭಸ್ಮ ಮಾಡಿದನು, ಇದರಿಂದ ಅವನು ಅನಂಗ ಅಥವಾ 'ದೇಹವಿಲ್ಲದ' ಆದನು. ಕಾಮದೇವನು ಪ್ರೇಮ ಮತ್ತು ಕಾಮನೆಯ ಸಂಕೇತವಾಗಿದೆ, ಮತ್ತು ಅವರ ಇತರ ಹೆಸರುಗಳಲ್ಲಿ 'ಮದನ,' 'ಮನ್ಮಥ,' ಮತ್ತು 'ಕಂದರ್ಪ' ಸೇರಿವೆ. ಕಾಮದೇವನು ಪ್ರೇಮ ಮತ್ತು ಕಾಮನೆಯ ದೇವತೆ. ಅವರ ಕಥೆಯನ್ನು ಭಾರತೀಯ ಸಂಸ್ಕೃತಿಯಲ್ಲಿ ಪ್ರೇಮ ಮತ್ತು ವಾಸನೆಯ ಸಂಕೇತವಾಗಿ ಪರಿಗಣಿಸಲಾಗಿದೆ.
ಕೃತಯುಗದಲ್ಲಿ - ತ್ರಿಪುರಸುಂದರಿ, ತ್ರೇತಾ ಯುಗ - ಭುವನೇಶ್ವರಿ, ದ್ವಾಪರ ಯುಗ - ತಾರಾ, ಕಲಿಯುಗ - ಕಾಳಿ.